ದುಲೀಪ್ ಸಿಂಹಜಿ -
ಭಾರತದ ಶ್ರೇಷ್ಠ ಕ್ರಿಕೆಟ್ ಆಟಗಾರ. ಈತ ಆಕರ್ಷಕ ಬ್ಯಾಟುಗಾರನಲ್ಲದೇ ದಕ್ಷ ಫೀಲ್ಡರೂ ಆಗಿದ್ದ. ಇವನ ಶಿಕ್ಷಣ ಇಂಗ್ಲೆಂಡಿನಲ್ಲಾಯಿತು. ಕೇಂಬ್ರಿಜ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದಾಗಲೇ ಈತ ಕೇಂಬ್ರಿಜ್ ಕ್ರಿಕೆಟ್ ತಂಡದಲ್ಲಿ ಆಟವಾಡಿದ. ಭಾರತದ ಇನ್ನೋರ್ವ ಶ್ರೇಷ್ಠ ಕ್ರಿಕೆಟ್ ಆಟಗಾರ ರಣಜಿತ್ ಸಿಂಹಜಿ ಈತನ ಚಿಕ್ಕತಂದೆ. ಆತ ಸ್ವೀಕರಿಸಿದ ಅಣ್ಣನ ನಾಲ್ಕು ದತ್ತುಮಕ್ಕಳಲ್ಲಿ ಈತ ಅತಿ ಕಿರಿಯವ. ಕ್ರಿಕೆಟ್ ಆಡುವುದರಲ್ಲಿ ಇವನಿಗೆ ರಣಜಿತ್ ಸಿಂಹಜಿಯ ಅಮೂಲ್ಯ ಮಾರ್ಗದರ್ಶನ ದೊರೆಯಿತು. 1930ರಲ್ಲಿ ಇಂಗ್ಲೆಂಡಿನಲ್ಲಿ ಕೌಂಟಿ ಪಂದ್ಯದಲ್ಲಿ ಆಡಿ ಈತ ಒಂದು ಹೊಸ ದಾಖಲೆ ನಿರ್ಮಿಸಿದ. ಆ ತಂಡ ಗಳಿಸಿದ 521 ರನ್ನುಗಳಲ್ಲಿ ಈತ ಗಳಿಸಿದ್ದು 333. ಇನ್ನೊಮ್ಮೆ ಇಂಗ್ಲೆಂಡಿನಲ್ಲಿ ಸಸೆಕ್ಸ್ ತಂಡದ ಪರವಾಗಿ ಒಂದೇ ಪಂದ್ಯದ ಎರಡು ಇನ್ನಿಂಗ್‍ಗಳಲ್ಲಿ ಕ್ರಮವಾಗಿ 125 ಮತ್ತು 103 ರನ್ನುಗಳಿಸಿ ಇಂಗ್ಲೆಂಡಿನ ಕ್ರಿಕೆಟ್ ಕ್ರೀಡಾಭಿಮಾನಿಗಳ ಪ್ರಶಂಸೆಗೆ ಈತ ಪಾತ್ರನಾದನಲ್ಲದೆ ಎರಡನೆಯ ಇನ್ನಿಂಗ್‍ನಲ್ಲಿ ಔಟಾಗದೆ ಉಳಿದ. ಚೆಂಡನ್ನು ಈತ ಬಾರಿಸುವ ವಿಧಾನ ತುಂಬ ಆಕರ್ಷಕವಾಗಿತ್ತು. ಆಸ್ಟ್ರೇಲಿಯದ ವಿರುದ್ಧ ಆಡಿದ ಪ್ರಥಮ ಟೆಸ್ಟಿನಲ್ಲಿ ಈತ 173 ರನ್ ಗಳಿಸಿ ಭಾರತದ ಕ್ರಿಕೆಟ್ ಟೆಸ್ಟ್ ಪಂದ್ಯಗಳ ಇತಿಹಾಸದಲ್ಲಿ ತನ್ನ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಿದ.

1929ರಲ್ಲಿ ಪ್ರಥಮವಾಗಿ ಟೆಸ್ಟ್ ಪಂದ್ಯದಲ್ಲಿ ಸ್ಥಾನ ಪಡೆದ ಈತ ಒಟ್ಟು 12 ಸಲ ಟೆಸ್ಟ್ ಪಂದ್ಯಗಳಲ್ಲಾಡಿದ. 1931 ರಲ್ಲಿ ನ್ಯೂಜಿûೀಲೆಂಡ್ ವಿರುದ್ಧ ಆಡಿದ್ದು ಇವನ ಕೊನೆಯ ಟೆಸ್ಟ್ ಪಂದ್ಯ. ಆ ಮೇಲೆ ಕ್ಷಯರೋಗ ಅಂಟಿಕೊಂಡಿದ್ದರಿಂದ ಕ್ರಿಕೆಟಿನಿಂದ ನಿವೃತ್ತಿ ಪಡೆದನಾದರೂ ಭಾರತ ಸ್ವಾತಂತ್ರ್ಯ ಗಳಿಸಿದ ಅನಂತರ ಈತ ಆಸ್ಟ್ರೇಲಿಯದಲ್ಲಿ ಭಾರತದ ಹೈಕಮಿಷನರಾಗಿ ಸೇವೆ ಸಲ್ಲಿಸಿದ.

ದುಲೀಪ್ ಟ್ರೋಫಿ: ದುಲೀಪ್ ಸಿಂಹಜಿಯ ಹೆಸರು ಶಾಶ್ವತವಾಗಿ ನೆನಪಿನಲ್ಲಿರಬೇಕು ಮತ್ತು ಅವನ ಹೆಸರಿನಿಂದ ಕ್ರಿಕೆಟ್ ಆಟಗಾರರು ಪ್ರೋತ್ಸಾಹಿತರಾಗಬೇಕು ಎಂಬ ಉದ್ದೇಶಗಳಿಂದ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ 1961 ರಲ್ಲಿ ಭಾರತದ ವಿವಿಧ ವಲಯಗಳ ಕ್ರಿಕೆಟ್ ತಂಡಗಳಿಗಾಗಿ ಹೊಸ ಪಂದ್ಯವನ್ನು ಪ್ರಾರಂಭಿಸಲಾಯಿತು. ಈಗ ಭಾರತದಲ್ಲಿ ಪ್ರತಿವರ್ಷವೂ ಈ ಪಂದ್ಯಗಳಾಗುತ್ತವೆ. ದಕ್ಷಿಣವಲಯ ಈಗಾಗಲೇ ಐದುಸಲ ದುಲೀಪ್ ಟ್ರೋಫಿಯನ್ನು ಗಳಿಸಿದೆ.			(ಎಸ್.ಎಚ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ